ಸಂನ್ಯಾಸ
 	ನಾಲ್ಕು ಆಶ್ರಮಗಳಲ್ಲಿ ಸಂನ್ಯಾಸ ಕೊನೆಯದು. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ತ, ಸಂನ್ಯಾಸ ಇವು ಭಾರತೀಯ ತತ್ವಶಾಸ್ತ್ರದ ಪ್ರಕಾರ ವ್ಯಕ್ತಿ ಅನುಸರಿಸಬೇಕಾದ ನಾಲ್ಕು ಆಶ್ರಮಗಳು. ಸಂನ್ಯಾಸ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಹೆಚ್ಚು ಬಳಕೆಯಲ್ಲಿರುವ ಪದ. ಸ ಎಂದರೆ ಸಂಪೂರ್ಣವಾಗಿ, ನ್ಯಾಸ ಎಂದರೆ ಬಿಡುವುದು ಎಂಬುದು ಇದರ ಅರ್ಥ. ಅಂದರೆ ಆತ್ಮದ ಹೊರತಾಗಿ ಉಳಿದುದೆಲ್ಲ ಮನೋದೈಹಿಕ ಸಹಜ ಬಯಕೆಗಳನ್ನು ಬಿಡುವುದು. ಸಂನ್ಯಾಸ ಎಂದರೆ ತ್ಯಾಗ ಎಂಬ ಅರ್ಥವೂ ಇದೆ. ಕರ್ಮ ಸಂನ್ಯಾಸ, ಫಲ ಸಂನ್ಯಾಸ ಮುಂತಾದವು ಭಾರತೀಯ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪರಿಚಿತವಾದ ಪದಗಳು. ಮೋಕ್ಷ ಪ್ರಾಪ್ತಿಯೇ ಇದರ ಗುರಿ. ಮೋಕ್ಷ ಎಂದರೆ ಜನನ ಮರಣಗಳ ನಿರಂತರ ಚಕ್ರದ ನಿಲುಗಡೆ, ಎಲ್ಲನೋವು ಸಂಕಷ್ಟಗಳ ಕೊನೆ. 

	ಈ ನಾಲ್ಕು ಆಶ್ರಮಗಳ ಕ್ರಮಾಂಕ ಪಾಲನೆಯನ್ನು ಛಾಂದೋಗ್ಯ ಉಪನಿಷತ್ತು ಪ್ರತಿಪಾದಿಸುತ್ತದೆ. ಆದರೆ ಕೆಲವು ವಿಶೇಷ ಸಂದರ್ಭಗಳಲ್ಲಿ ಇದನ್ನು ಅನುಸರಿಸದೆಯೂ ಇರಬಹುದು. ಬ್ರಹ್ಮಚರ್ಯಾಶ್ರಮದಿಂದ ನೇರವಾಗಿ ಸಂನ್ಯಾಸಾಶ್ರಮವನ್ನು ಹೊಂದಬಹುದು. ಶಂಕರ, ಮಧ್ವರ ಸಂನ್ಯಾಸ ಈ ಬಗೆಯದು. ರಾಮಾನುಜರು ಗೃಹಸ್ಥರಾಗಿದ್ದು, ಅನಂತರ ಸಂನ್ಯಾಸ ಆಶ್ರಮವನ್ನು ಸ್ವೀಕರಿಸಿದರು. 

	ಸಂನ್ಯಾಸ ಸ್ಥಿತಿಯಲ್ಲಿ ವ್ಯಕ್ತಿ ಒಂದೇ ಸ್ಥಳದಲ್ಲಿ, ನಿಂತಕಡೆಯೇ ದೀರ್ಘಕಾಲದವರೆಗೆ ನಿಲ್ಲುವಂತಿಲ್ಲ. ಅವನದು ಅಲೆಮಾರಿ ಜೀವನ. ಮನೆಮನೆಗೆ ಹೋಗಿ ಭಿಕ್ಷೆಬೇಡಿ ಹಸಿವನ್ನು ನೀಗಿಸಿಕೊಳ್ಳಬೇಕು. ಯಾವ ಭಿಕ್ಷೆಯೂ ಸಿಗದಿದ್ದರೆ, ವ್ಯಥೆ ಪಡಕೂಡದು. ಕೋಪತಾಪಗಳಿಗೆ ಅವಕಾಶವಿಲ್ಲ; ಪರರ ದೂಷಣೆ, ನಿಂದನೆಗೆ ಅವಕಾಶವಿಲ್ಲ. ಕಾಮ, ಕ್ರೋಧ, ಮೋಹ, ಮದ, ಲೋಭ ಮಾತ್ಸರ್ಯಗಳೆಂಬ ಅರಿಷಡ್ವರ್ಗಗ ಳನ್ನು ಸಂನ್ಯಾಸಿಯಾದವನು ಗೆದ್ದು; ಜ್ಞಾನ ಹಾಗೂ ವೈರಾಗ್ಯ ಸಂಪಾದನೆ ಮಾಡಬೇಕು. ಸಂನ್ಯಾಸಿಯಾದವನಿಗೆ ದೇಹಾಭಿಮಾನವಾಗಲೀ ದೇಹಭಾವ ವಾಗಲೀ ಇರುವುದಿಲ್ಲ; ಅಹಂಕಾರ ಮಮಕಾರಗಳಿಂದ ಆತ ಮುಕ್ತನಾಗಿ ರುತ್ತಾನೆ. ಲೋಕಕಲ್ಯಾಣಕ್ಕಾಗಿ ಮುಂದಾಗುತ್ತಾನೆ; ಇವನನ್ನೇ ಜೀವನ್ಮುಕ್ತ ಎಂದು ಕರೆಯುವುದು. ಎಲ್ಲ ಧರ್ಮಗಳಲ್ಲೂ ಸಂನ್ಯಾಸದ ಪರಿಕಲ್ಪನೆ ಇದೆ.										
	(ವಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ